ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಹಿರೋಷಿಮಾ ದಿನದ ಪ್ರಯುಕ್ತ “ಪರಮಾಣು ಬಾಂಬ್ ಮತ್ತು ಹಿರೋಷಿಮಾ ವೈಜ್ಞಾನಿಕ ವಿಜಯ ಅಥವಾ ದುರಂತವೋ? ಎಂಬ ವಿಷಯದ ಕುರಿತು ವಿ- ಪ್ರೇರಣಾ ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕಾಲೇಜಿನ ಟ್ರಸ್ಟಿಗಳಾದ ಶರತ್ ಗೋರೆಯವರು ಮಾತನಾಡುತ್ತಾ, ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ವಿಜ್ಞಾನದ ಪಾತ್ರ ಬಹಳ ಮುಖ್ಯವಾಗಿರುತ್ತದೆ. ವಿಜ್ಞಾನ ಬೆಳೆದಂತಹ ದೇಶವು ಜಗತ್ತಿನಲ್ಲಿಯೇ ಅಭಿವೃದ್ಧಿ ಹೊಂದಿದ ಉತ್ತಮ ದೇಶವಾಗಿ ಬೆಳೆದಿರುತ್ತದೆ. ಒಂದು ದೇಶದ ಅಭಿವೃದ್ಧಿಗೆ ವಿಜ್ಞಾನವೇ ಅಡಿಪಾಯವಾಗಿತ್ತದೆ ಎಂದು ಹೇಳಿದರು.
ಅಮೆರಿಕ ದೇಶವು ಜಗತ್ತಿನಲ್ಲಿಯೇ ಅಭಿವೃದ್ಧಿ ಹೊಂದಿದ ದೇಶವಾಗಿ ಮುಂದುವರಿಯುತ್ತಾ ಇರಬೇಕಾದರೆ ಅದಕ್ಕೆ ಆ ದೇಶದಲ್ಲಿರುವ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿಗಳೇ ಪ್ರಮುಖ ಕಾರಣವಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಎರಡನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ಅಣುಬಾಂಬ್ ಗಳನ್ನು ಕಂಡುಹಿಡಿದು ಬಳಸಲಾಗಿತ್ತು ಈ ಬಾಂಬ್ ತಯಾರಿಕೆಯ ಹಿಂದೆ ನ್ಯೂಕ್ಲಿಯರ್ ಭೌತಶಾಸ್ತ್ರ ಮತ್ತು ವಿಜ್ಞಾನಿಗಳ ಪಾತ್ರ ಪ್ರಮುಖವಾಗಿತ್ತು ಎಂದು ಹೇಳಿದರು.
ಹಿಟ್ಲರ್ ನ ಕ್ರೂರತ್ವದಿಂದ ೧೯೩೯ ರ ಸಮಯದಲ್ಲಿ ೫೦ ಕ್ಕೂ ಹೆಚ್ಚು ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದ ವಿಜ್ಞಾನಿಗಳು ತಮ್ಮ ಹುಟ್ಟೂರಾದ ಜರ್ಮನಿಯನ್ನು ತೊರೆದು ಬೇರೆ ದೇಶಗಳಲ್ಲಿ ಆಶ್ರಯ ಪಡೆದುಕೊಂಡಿದ್ದರು. ಭೌತ ವಿಜ್ಞಾನಕ್ಕೆ ಇರುವ ಶಕ್ತಿಯನ್ನು ಇವತ್ತು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು. ಇಂದು ವಿಜ್ಞಾನ ಯಾರ ಕೈಯಲ್ಲಿದೆ ಎನ್ನುವುದು ಬಹಳ ಮುಖ್ಯ ಉತ್ತಮರ ಕೈಯಲ್ಲಿ ವಿಜ್ಞಾನವಿದ್ದರೆ ಅವರು ಆ ದೇಶದ ಅಭಿವೃದ್ಧಿಗೆ ಬಳಸುತ್ತಾರೆ ಕೆಟ್ಟವರ ಕೈಯಲ್ಲಿ ವಿಜ್ಞಾನವಿದ್ದರೆ ಅವರು ದೇಶದ ನಾಶಕ್ಕೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಎರಡನೇ ಜಾಗತಿಕ ಯುದ್ಧವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದರೆ ಅರಿವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರು ಹಾಗೂ ಟ್ರಸ್ಟಿಗಳಾದ ಡಾ.
ಎಸ್.ಎನ್.ವೆಂಕಟೇಶ್ ನಾಯಕ್ ರವರು ಮಾತನಾಡಿ, ವಿಜ್ಞಾನವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ನಿಗದಿತ ಪಠ್ಯಗಳ ಬೋಧನೆಯೊಂದಿಗೆ ಈ ರೀತಿಯ ಉಪನ್ಯಾಸಗಳನ್ನು ಆಯೋಜಿಸಿ ವಿಜ್ಞಾನದ ಮಹತ್ವವನ್ನು ತಿಳಿಸುವ ಕಾರ್ಯಗಳನ್ನು ಮಾಡುತ್ತಿದ್ದೇವೆ. ನೀವು ಇದರ ಸದುಪಯೋಗವನ್ನು ಪಡೆದುಕೊಂಡು ನೀವು ಕೂಡ ಮುಂದೆ ಉತ್ತಮ ವಿಜ್ಞಾನಿಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು.
ಈ ಕಾರ್ಯಕ್ರಮದಲ್ಲಿ ವೈಬ್ರೆಂಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಮೆಹಬೂಬ್ ಬಾಷಾ, ಚಂದ್ರಶೇಖರ್ ರಾಜೇ ಅರಸ್, ಯೋಗೇಶ್ ಬೆಡೆಕರ್, ಮತ್ತು ಸುಭಾಶ್ ಝಾ ಉಪಸ್ಥಿತರಿದ್ದರು . ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥ ನಿತಿನ್ ಪಿ. ಎಸ್. ನಿರೂಪಿಸಿ , ಕನ್ನಡ ಉಪನ್ಯಾಸಕ ಅಜಿತ್ ಕುಮಾರ್ ವಂದಿಸಿದರು
Quick Links
Contact Details
Kallabettu, Moodubidire, Mangalore District – 574197
7411417028,7411649881